ಚಾರ್ಜ್ ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಅಪೋಸಿಟ್ ಲಾಯರ್‌ಗು ಚಾರ್ಜ್‌ಶೀಟ್ ನೀಡಲಾಗುತ್ತದೆ. ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನು ಅಲ್ಲ. ಅದನ್ನು ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಸಹಜವಾಗಿ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ಹೊರಗೆ ಬರುತ್ತದೆ. ಬೆಂಗಳೂರು: ನಟ ದರ್ಶನ್ ತೂಗುದೀಪ ಸೇರಿದಂತೆ 16 ಮಂದಿ ಆರೋಪಿಗಳಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಜಾರ್ಜ್ ಶೀಟ್ ವಿವರಗಳು ಸಾರ್ವಜನಿಕವಾಗಿ ಬಟ್ಟಬಯಲು ಆಗುವುದರಿಂದ ನ್ಯಾಯಾಲಯದ ಪ್ರಕ್ರಿಯೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಮಂಗಳವಾರ ಹೇಳಿದ್ದಾರೆ.ಹೊರ ಬರುವ ಆರೋಪಪಟ್ಟಿ ಮಾಹಿತಿಯು ಮುಂದಿನ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣದ ವಿಚಾರಣೆ ಮುಂದುವರಿಯಲಿದೆ. ಸಾರ್ವಜನಿಕವಾಗಿ ಯಾರಾದರೂ ಏನಾದರೂ ಮಾತನಾಡುತ್ತಾರೆ ಎಂಬ ಕಾರಣಕ್ಕೆ ನ್ಯಾಯಾಲಯ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುತ್ತಾರೆ ಎಂದರು. ಕಳೆದ ವಾರ ಪೊಲೀಸರು ಪ್ರಕರಣದ 3,991 ಪುಟಗಳ ಪ್ರಾಥಮಿಕ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಸದಾಶಿವನಗರದ ತಮ್ಮ ನಿವಾಸದ ಬಳಿ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಅಂಶ ಬಹಿರಂಗವಾಗುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಅಪೋಸಿಟ್ ಲಾಯರ್‌ಗು ಚಾರ್ಜ್‌ಶೀಟ್ ನೀಡಲಾಗುತ್ತದೆ. ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನು ಅಲ್ಲ. ಅದನ್ನು ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಸಹಜವಾಗಿ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ಹೊರಗೆ ಬರುತ್ತದೆ. ಕೋರ್ಟ್‌ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದು ಹೇಳಿದರು.ತ್ವರಿತಗತಿಯ ನ್ಯಾಯಾಲಯ ಸ್ಥಾಪನೆರೇಣುಕಾಸ್ವಾಮಿ ಹತ್ಯೆ ಪ್ರಕರಣ ವಿಚಾರಣೆ ನಡೆಸಲು ತ್ವರಿತಗತಿಯ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ನ್ಯಾಯಾಲಯದಿಂದ ಶೀಘ್ರಗತಿಯಲ್ಲಿ ವಿಚಾರಣೆ ಮುಗಿದು, ಆದೇಶ ಪ್ರಕಟವಾಗಲಿದೆ ಎಂದರು. ತ್ವರಿತಗತಿಯ ನ್ಯಾಯಾಲಯ ಸ್ಥಾಪನೆ ಸಂಬಂಧ ಕಾನೂನು ತಜ್ಞರೊಂದಿಗೆ ಪೊಲೀಸರು ಚರ್ಚೆ ನಡೆಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಕೂಡಾ ಹೇಳಿದ್ದಾರೆ.ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೊಂಡಿದ್ದು, ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಕಚೇರಿ ಸ್ಪೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶ ಉಲ್ಲೇಖಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಮಿಕ್ಕ ವಿಚಾರಗಳು ಗೊತ್ತಿಲ್ಲ ಎಂದರು.ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಲು ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನದ‌ ಬಗ್ಗೆ ಚರ್ಚೆ ಅನಗತ್ಯ ಎಂಬ ವಿಚಾರವನ್ನು ನಾನು ಸಹ ಹೇಳಿದ್ದೇನೆ. ಮಾಧ್ಯಮದವರು ಮುಖ್ಯಮಂತ್ರಿಯಾಗುತ್ತೀರ ಎಂದು ಕೇಳಿದಾಗ, ನಾವು ಬೇಡ ಅಂತ ಯಾಕೆ ಹೇಳಬೇಕು ಅಂತ ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಏನು ಇಲ್ಲ ಎಂದರು.ಸಚಿವ ಎಂ.ಬಿ.ಪಾಟೀಲ್ ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ‌. ನಾನು ಸಹ ಗೃಹ ಇಲಾಖೆಗೆ ಸಂಬಂಧಿಸಿದ ಕೆಲಸ ಇದ್ದರೆ ದೆಹಲಿಗೆ ಹೋಗುತ್ತೇನೆ. ಹೋದಾಕ್ಷಣ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ಹೋಗಿದ್ದರು ಅಂತ ಹೇಳಿ ಬಿಟ್ಟರೆ ಹೇಗೆ? ಈ ಬಗ್ಗೆ ಚರ್ಚೆಯೇ ಅನಗತ್ಯ ಎಂದು ಹೇಳಿದರು‌.